Zero Garbage Kitchen

ZeroWaste_logo_green_web

As a socially responsible NGO, we have also achieved another milestone, which is creating a Zero garbage kitchen. The kitchen, which was creating and dumping 300 Kgs., of garbage on a daily basis, in the past is proud to achieve a zero garbage status. As of today, the BBMP garbage van does not even visit our Kitchen.

ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರಂನಲ್ಲಿರುವ ಅದಮ್ಯ ಚೇತನದ ಅನ್ನದ ಕಾರ್ಖಾನೆ ನಿಮಗೆ ಕಣ್ಣಿಗೆ ರಾಚುವ ಹಾಗೇನೂ ಇಲ್ಲ. ಹಿಂಬದಿಯಲ್ಲಿ ಬಡಾವಣೆ ಮನೆಗಳಿರುವ ಏರು ಭೂಪ್ರದೇಶ. ಬಲ ಪಕ್ಕದಲ್ಲೇ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲ. ಒಂದು ರೀತಿಯಲ್ಲಿ ಏರಿಗೆ ತಾಗಿದಂತೆ ಅದಮ್ಯ ಚೇತನದ ಊಟ ತಯಾರಿಕಾ ಘಟಕ ಹಬ್ಬಿಕೊಂಡಿದೆ. ಕಟ್ಟಡದ ಸುತ್ತಲೂ ನೀವು ಪ್ರದಕ್ಷಿಣೆ ಹಾಕಿದರೆ ಕಾಣುವುದೆಲ್ಲ ಇಂಧನಕ್ಕೆ ಸಂಬಂಧಿಸಿದ್ದೇ: ಎಡಬದಿಯಲ್ಲಿ ಡೀಸೆಲ್ ಘಟಕ. ಬಲಬದಿಯಲ್ಲಿ ದೈತ್ಯಾಕಾರದ ಗ್ಯಾಸಿಫೈಯರ್.

`ಶೂನ್ಯ ತ್ಯಾಜ್ಯ ಅಥವಾ `ಸೊನ್ನೆ ಕಸ’ದ ಗುರಿಯನ್ನು ಇಟ್ಟುಕೊಂಡು ಈಗ `ಮಾದರಿ’ ಎಂದು ಹೇಳಬಹುದಾದ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಅದಮ್ಯ ಚೇತನವು ಇಂಧನ ಉಳಿತಾಯ, ಕಸದ ನಿರ್ವಹಣೆಯಲ್ಲಿ  ಬೆಂಗಳೂರಿನ ಮುಂಚೂಣಿ ಸಂಸ್ಥೆಯಾಗಿದೆ.

Zero Garbage Events

View the presentation of the Zero Garbage initiatives by ACF here

ದಿನಕ್ಕೆ ಏಳು ಟನ್ ಅನ್ನ ಬೇಯಿಸುವ, ಸಾಂಬಾರು ಪುಡಿಗಾಗಿ ೨೫೦ ಕಿಲೋ ಕಾಳುಕಡಿಗಳನ್ನು ಅಲ್ಲೇ ಹುರಿದು ಪುಡಿ ಮಾಡುವ, ೨ ಟನ್ ಕಿಲೋ ತರಕಾರಿ ಕತ್ತರಿಸಿ ಸಾಂಬಾರು ಮಾಡುವ, ೨೦೦ ಲೀಟರ್ ಎಣ್ಣೆ ಬಳಸುವ, ೯೦೦೦ ಲೀಟರ್ ಹಾಲಿನ ಪುಡಿ ತರಿಸಿ ಬಳಸುವ ಈ ಬಿಸಿಯೂಟದ ಸ್ಥಾವರಕ್ಕೆ ಎಷ್ಟೆಲ್ಲ ಶಾಖ ಬೇಕು ಎಂಬುದನ್ನು ಊಹಿಸಿದಾಗಲೇ ಇಂಧನ ಉಳಿತಾಯ, ಕಸದ ನಿರ್ವಹಣೆ ಎಂಬ ಕಸರತ್ತಿನ ಗಂಭೀರತೆ ಗೊತ್ತಾಗುತ್ತದೆ.

Gasifier installed at ACF

ಮೊದಲು ದಿನಾಲೂ ೪೦ ವಾಣಿಜ್ಯ ಎಲ್‌ಪಿಜಿ ಸಿಲಿಂಡರನ್ನು ಬಳಸಬೇಕಾಗಿತ್ತು. ಒಂದೆರಡು ಗಂಟೆಗಳಲ್ಲೇ ೪೦ ಸಿಲಿಂಡರುಗಳನ್ನು ಬದಲಿಸಬೇಕಾಗಿತ್ತು; ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ. ಸಿಲಿಂಡರನ್ನು ಜೋಡಿಸುವಾಗ, ತೆಗೆಯುವಾಗ ತುಂಬಾ ಎಚ್ಚರಿಕೆಯೂ ಅಗತ್ಯ. ಇನ್ನು ದಿನಾಲೂ ಈ ಸಿಲಿಂಡರುಗಳು ಘಟಕಕ್ಕೆ ಬರುವುದನ್ನು, ಖಾಲಿ ಸಿಲಿಂಡರುಗಳು ಹೊರಹೋಗುವುದನ್ನು ಸದಾ ಗಮನಿಸಬೇಕು.

ಈ ತಾಪತ್ರಯಗಳಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಅದಮ್ಯ ಚೇತನಕ್ಕೆ ಬಂದ ಸಲಹೆ: ಡೀಸೆಲ್ ಆಧಾರಿತ ಗ್ಯಾಸ್ ಜನರೇಟರ್ ಬಳಸಿ. ಸರಿ, ಡೀಸೆಲ್ ಘಟಕವೂ ಬಂತು. ಡೀಸೆಲ್ ಎಂಬ ಇಂಧನದ ಪವಾಡವೇ ಹಾಗೆ. ಸ್ವಿಚ್ ಒತ್ತಿದ ಕೂಡಲೇ ಬೇಕಾದಷ್ಟು ಹಬೆ ಉಕ್ಕುತ್ತದೆ. ಸಮಸ್ಯೆ ಸೊನ್ನೆ. ಸಮಯಕ್ಕೆ ಸರಿಯಾಗಿ ಡೀಸೆಲ್ ಸಂಗ್ರಹ ಇದ್ದರಾಯಿತು.

ಈ ವ್ಯವಸ್ಥೆಯಿಂದ ಹಳೆಯ ಸಮಸ್ಯೆಗಳೇನೋ ನಿವಾರಣೆಯಾದವು. ಆದರೆ ಡೀಸೆಲ್ ಘಟಕದ ಖರ್ಚು ವೆಚ್ಚಗಳು ಮತ್ತೆ ಲೆಕ್ಕಪತ್ರದಲ್ಲಿ ಮುಗುಮ್ಮಾಗಿ ಕೂತವು. ಹಾಗಾದರೆ ಇನ್ನೇನು ಮಾಡಬಹುದು ಎಂದು ತಡಕಾಡಿದಾಗ ನೆರವಿಗೆ ಬಂದಿದ್ದು ಟೇರಿ ಸಂಸ್ಥೆಯ ಗ್ಯಾಸಿಫೈಯರ್. ಇದಕ್ಕೆ ವ್ಯರ್ಥ ಮರದ ತುಂಡುಗಳನ್ನು ಬಳಸುತ್ತಾರೆ ಎಂಬುದು ಕುತೂಹಲ ಕೆರಳಿಸಿತು. ಮೊದಮೊದಲು ಎಲ್ಲವೂ ಚೆನ್ನಾಗಿ ಕಂಡಿದ್ದು ನಿಜ. ಆದರೆ ಬರಬರುತ್ತ ಈ ಗ್ಯಾಸಿಫಯರ್‌ಗಾಗೇ ಮರಗಳನ್ನು ಕತ್ತರಿಸಿ ತರುತ್ತಿದ್ದಾರೇನೋ ಎಂಬ ಸಂಶಯ ದಟ್ಟವಾಯಿತು. ಮರ ಕಡಿದು ಇಂಧನ ಉಳಿತಾಯ ಮಾಡುವುದರಲ್ಲಿ ಎಂಥ ಮಹಾನ್ ಸಾಧನೆ ಇದೆ? ಅಲ್ಲದೆ ಈ ಘಟಕವನ್ನು ಚಾಲನೆಗೊಳಿಸುವುದೇ ಒಂದು ತ್ರಾಸದಾಯಕ ಸಂಗತಿಯಾಯಿತು.

ಇದೆಲ್ಲ ಪ್ರಯತ್ನಗಳ, ಅನುಭವದ ಫಲವಾಗಿ ಕೊನೆಗೆ ಪ್ರತಿಷ್ಠಾಪನೆಯಾಗಿದ್ದು ರೈಲು ಉಗಿಬಂಡಿ! ಯಥಾವತ್ ರೈಲು ಉಗಿಬಂಡಿಯಂಥದ್ದೇ ಸ್ಥಾವರ. ಸದಾ ಅದರ ಹೊಟ್ಟೆ ಬಿಸಿಯಾಗಿಯೇ ಇರುತ್ತದೆ. ನೀವು ಅದಕ್ಕೆ ಎಂಥ ಕಸವನ್ನಾದರೂ ಹಾಕಿ, ಅದನ್ನೆಲ್ಲ ಸುಟ್ಟು ಹಬೆಶಕ್ತಿಯನ್ನು ಕೊಡುತ್ತದೆ. ಅದನ್ನೂ ಮೊದಲೇ ಸಂಗ್ರಹ ಮಾಡಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಂಡರೆ ಸ್ವಿಚ್ ಒತ್ತಿದ ಹಾಗೆಯೇ ಇಂಧನ ಲಭ್ಯ. ಡೀಸೆಲ್ ಇಲ್ಲದೆಯೂ!

ಈ ಉಗಿಬಂಡಿಗೆ ಮುಖ್ಯವಾಗಿ ಬಳಸುವುದು ಬ್ರಿಕೆಟ್‌ಗಳನ್ನು. `ಅದರಲ್ಲೂ ಹಳ್ಳಿಗಳಲ್ಲಿ ಉತ್ಪಾದಿಸುವ ಬ್ರಿಕೆಟ್‌ಗಳನ್ನು ನಾವು ಹೆಚ್ಚಾಗಿ ಖರೀದಿಸಲ್ಲ. ನಗರದ ಸುತ್ತಮುತ್ತ, ನಗರದ ಕಸದಿಂದಲೇ ಉತ್ಪಾದಿಸುವ ಬ್ರಿಕೆಟ್‌ಗಳನ್ನೇ ಬಳಸುತ್ತೇವೆ. ಅಷ್ಟರಮಟ್ಟಿಗೆ ನಾವು ನಗರದ ಸಮಸ್ಯೆಗೆ ಪರಿಹಾರ ಹುಡುಕಿದ ಹಾಗಾಯ್ತಲ್ಲವೆ?’  ಎಂದು ತೇಜಸ್ವಿನಿ ಹೇಳುತ್ತಾರೆ. ಮೂರು ಖಾಸಗಿ ಬ್ರಿಕೆಟ್ ತಯಾರಕರ ಸಂಪರ್ಕದಿಂದ ನಿಯಮಿತ ಸರಬರಾಜು ಸಾಧ್ಯ.

ಈಗ ಬೆಂಗಳೂರಿನಲ್ಲಿ ಹೆಚ್ಚಾಗಿ ಬಳಸದೇ ಕಸವಾಗುತ್ತಿರುವ, ಆನಾರೋಗ್ಯಕ್ಕೂ ಕಾರಣವಾಗಿರುವ ಎಳನೀರು ಮೊಟ್ಟೆಗಳನ್ನು (ಖಾಲಿ ಬೊಂಡ) ಈ ಉಗಿಬಂಡಿ ಕಬಳಿಸುತ್ತಿದೆ. ಮೊದಲು ಎಳನೀರು ಮಾರಾಟಗಾರರನ್ನು ಸಂಪರ್ಕಿಸಿದಾಗ ಅವರೆಲ್ಲ ರೋಮಾಂಚನಗೊಂಡರು. ` ಈ ಕಸಕ್ಕೆ ನಾವೆಷ್ಟು ದುಡ್ಡು ಕೊಡಬೇಕು?’ ಎಂದು ಕೇಳಿದರು. ಆದರೆ ಅದಮ್ಯ ಚೇತನವು ` ಇಲ್ಲಾರೀ, ಇದು ಕಸವಲ್ಲ, ಇಂಧನ. ಆದ್ದರಿಂದ ನಾವೇ ದುಡ್ಡು ಕೊಡ್ತೀವಿ’ ಎಂದಾಗ ಅವರಿಗೆಲ್ಲ ಅಚ್ಚರಿ. ಪ್ರತಿದಿನ ಹಲವರು ಪ್ಲಾಸ್ಟಿಕ್ ಚೀಲಗಳಲ್ಲಿ ಬೊಂಡಗಳನ್ನು ತಂದು ಕೊಡುತ್ತಾರೆ. ಈಗಂತೂ ಉಗಿಬಂಡಿಯ ಶೇಕಡಾ ೨೦ರಷ್ಟು ಆಹಾರವು ಬೊಂಡಗಳಿಂದಲೇ ಬರುತ್ತೆ!

ಇನ್ನು ಅಡುಗೆ ಮಾಡಿದಾಗ ಬಳಸುವ ಕರಿಬೇವಿನ ಕಡ್ಡಿಗಳನ್ನು ತೊಳೆದು ಮೊದಲು ಸಾಂಬಾರಿಗೆ ಹಾಕಿ ಬಳಕೆ. ಆಮೇಲೆ ಅದನ್ನು ಕೊಂಚ ಒಣಗಿಸಿದ ಮೇಲೆ ಉಗಿಬಂಡಿ ಸ್ವಾಹಾಯ. ಹೀಗೆ ವಿಷವಲ್ಲದ ಎಂಥ ಕಸವೂ ಇಲ್ಲಿ ಕರಗಿ ಹೋಗುತ್ತದೆ.

ಈ ದೈತ್ಯ ಅಡುಗೆಮನೆಯಲ್ಲಿ ದಿನಾಲೂ ೩೦ ಕಿಲೋ ಅನ್ನ ಕೆಳಗೆ ಬಿದ್ದುಹೋಗುತ್ತದೆ. ಇದೂ ವ್ಯರ್ಥವಾಗುವುದಿಲ್ಲ. ಈ ಅನ್ನ ಮತ್ತು ಹಳಸಿದ ಆಹಾರವನ್ನು, ಶಾಲೆಯಿಂದ ಮರಳಿಬಂದ ಹೆಚ್ಚುವರಿ ಅನ್ನವನ್ನು ಬೆಂಗಳೂರಿನ ಕೆಲವು ಹಂದಿ ಸಾಕಣೆ ಕೇಂದ್ರಗಳಿಗೆ ಕೊಡಲಾಗುತ್ತದೆ. ದಿನಾಲೂ ಒಡೆಯುವ ೫೦೦ ತೆಂಗಿನ ಕಾಯಿ ನೀರನ್ನು ಬಯೋಗ್ಯಾಸ್‌ಗೆ ಬಳಸಿ ಅದು ಸಿಬ್ಬಂದಿಯ ಚಹಾ-ಕಾಫಿ ಮಾಡಲು ಸಾಕಾಗುತ್ತದೆ. ತೆಂಗಿನ ಚಿಪ್ಪು? ಅದನ್ನು ಮಸಲಾಲೆ ಹುರಿಯಲು ಬಳಸುತ್ತಾರೆ.

ಹೀಗೆ ಸಾವಿರಾರು ಮಕ್ಕಳಿಗೆ ಬೇಯಿಸುವ ಊಟಕ್ಕೆ ಹಬೆಯನ್ನು ಕೊಟ್ಟ ಉಗಿಬಂಡಿಯು ದಿನದ ಕೊನೆಯಲ್ಲಿ ಏಳೆಂಟು ನೂರು ಕಿಲೋ ಬೂದಿಯನ್ನೂ ಕಕ್ಕುತ್ತದೆ. ಅದಮ್ಯ ಚೇತನವು ಇದನ್ನು ತರಕಾರಿ ಕಸದೊಂದಿಗೆ ಬೆರೆಸಿ ಕಾಂಪೋಸ್ಟ್ ಮಾಡಿ ರೈತರಿಗೆ ಕೊಡುತ್ತಿದೆ. ರೈತರು ಅಲ್ಲಿಗೇ ಬಂದು ಒಯ್ಯುತ್ತಾರೆ. ಬೆಂಗಳೂರಿನಲ್ಲಿ ಇಲ್ಲಿ ಮಾತ್ರ ಬೂದಿ ಉತ್ಪಾದನೆಯೂ ದಿನಾಲೂ ಟನ್ನುಗಳ ಲೆಕ್ಕದಲ್ಲಿ ಆಗುತ್ತಿದೆ!

ಅದಮ್ಯ ಚೇತನದಿಂದ ಕೆಲವೊಮ್ಮೆ ಸಾಮಾಜಿಕ ಕಾರ್ಯಕ್ರಮಗಳಿಗೆ ಊಟ ಸರಬರಾಜಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಸಮಾರಂಭ ಎಂದಕೂಡಲೇ ಪ್ಲಾಸ್ಟಿಕ್ ಲೋಟ್, ತಟ್ಟೆ, ಚಮಚಾ, – ಎಲ್ಲವೂ ವಿಪರೀತ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಈ ಬಳಸಿ ಎಸೆಯುವ ವಿಕೃತಿಗೆ ತಡೆ ಹಾಕಲೆಂದು ಅದಮ್ಯ ಚೇತನವು ತನ್ನದೇ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದೆ. ಇಂಥ ಕಾರ್ಯಕ್ರಮಗಳಲ್ಲಿ ಜೈವಿಕ ವಸ್ತುವಾದ ಅಡಕೆ ಹಾಳೆಯ ತಟ್ಟೆಗಳನ್ನು ಅಥವಾ ಮರುಬಳಕೆ ಮಾಡಬಹುದಾದ ಸ್ಟೀಲ್ ತಟ್ಟೆಗಳನ್ನು ಬಳಸುತ್ತಾರೆ. ನಾಲ್ಕು ದಿನಗಳ ಕಾಲ ೮೦ ಸಾವಿರ ಜನರಿಗೆ ಊಟ ಹಾಕಿದ ಮೇಲೂ ಅಲ್ಲಿ ಕಸ ಕಾಣಲಿಲ್ಲ ಎನ್ನುತ್ತಾರೆ ತೇಜಸ್ವಿನಿ.

ಹೀಗೆ ಅದಮ್ಯ ಚೇತನವು ತನ್ನ ಮಹಾ ಅಡುಗೆಮನೆಯ ಕಸದ ಸಮಸ್ಯೆಯನ್ನು ನಿವಾರಿಸಿಕೊಂಡಿದೆ. ಬೆಂಗಳೂರಿನೊಳಗೇ ಇದ್ದು, ಕಸದ ವಾಹನವನ್ನೇ ದೂರ ಇಟ್ಟ ಇಂಥ ಉದಾಹರಣೆ ಅಪರೂಪ ಅಲ್ಲವೆ?

Back To Top