ತೆಲ್ಲೋಣಿಯ ಮೌಲಾಲಿಗೂ ‘ಅದಮ್ಯ ಚೇತನ’ಕ್ಕೂ ಹೃದಯ ಸಂಬಂಧ
ತೆರೆದ ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿ ; ‘ಆರೋಗ್ಯ ಚೇತನ’ದಡಿ ವಿದ್ಯಾರ್ಥಿಗೆ ಸಂಕ್ರಾಂತಿ
Maulali
ಬೆಂಗಳೂರಿನ ಅದಮ್ಯ ಚೇತನ ಸಾಮಾಜಿಕ ಸೇವಾ ಸಂಸ್ಥೆಯು ದೂರದ ಗುಲಬರ್ಗಾದ ಶಾಲಾ ವಿದ್ಯಾರ್ಥಿಯೊಬ್ಬನಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಿ ವಿದ್ಯಾರ್ಥಿಯ ಬದುಕಿಗೆ ಹೊಸ ಅಧ್ಯಾಯವನ್ನು ಬರೆದಿದೆ.
ಗುಲಬರ್ಗಾ ಜಿಲ್ಲೆಯ ಅಫಜಲಪೂರ ತಾಲೂಕಿನ ತೆಲ್ಲೋಣಿ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ೪ ನೇ ತರಗತಿ ವಿದ್ಯಾರ್ಥಿ ಮೌಲಾಲಿ ಪಾಶಾನಿಗೆ ತಕ್ಷಣವೇ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಆತನಿಗೆ ಸಂಕೀರ್ಣವಾದ ಹೃದಯದ ಸಮಸ್ಯೆ ಇದೆ ಎಂದು ಸೋಲಾಪುರದ ಶ್ರೀರಾಮ್ ಹಾಟ್ ಕೇರ್ ಸೆಂಟರ್‌ನ ವೈದ್ಯರು ಹೇಳಿದ್ದರು. ಆದರೆ ಮೌಲಾಲಿ ಕುಟುಂಬದ ಕೈಯಲ್ಲಿ ಹಣವಿಲ್ಲ. ಕೊನೆಗೆ ಅವನ ತಂದೆ ರಜಾಕ್‌ಸಾಬ್ ಮಾಶಾಳಗೆ ತೋಚಿದ್ದು ಗುಲಬರ್ಗಾದಲ್ಲಿದ್ದ ಅದಮ್ಯ ಚೇತನದ ಕಾರ್ಯಾಲಯ. ಅದಮ್ಯ ಚೇತನದ ‘ಆರೋಗ್ಯ ಚೇತನ’ ಯೋಜನೆಯಡಿ ವಿಮೆ ಹೊಂದಿದ್ದ ಮೌಲಾಲಿಯನ್ನು ಬೆಂಗಳೂರಿಗೆ ಕರೆಸಲಾಯಿತು. ಇದೇ ಜನವರಿ ೬ರಂದು ಮೌಲಾಲಿಗೆ ನಾರಾಯಣ ಹೃದಯಾಲಯದಲ್ಲಿ ಉಚಿತವಾಗಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆದು ಅವನೀಗ ಗುಣಮುಖನಾಗುತ್ತಿದ್ದಾನೆ. ಬೆಂಗಳೂರಿನ ಜಯನಗರ ರೋಟರಿ ಸಂಸ್ಥೆಯೂ ಈ ಸೇವೆಯಲ್ಲಿ ಭಾಗಿಯಾಗಿದೆ.

Mouli with father
ಬೆಂಗಳೂರಿನ ಸಂಸದ ಶ್ರೀ ಅನಂತಕುಮಾರ್‌ರವರು ಪ್ರಧಾನ ಪೋಷಕರಾಗಿರುವ ಅದಮ್ಯ ಚೇತನ ಸಂಸ್ಥೆಯು ರೂಪಿಸಿರುವ ಆರೋಗ್ಯ ಚೇತನ ಕಾರ್ಯಕ್ರಮದಲ್ಲಿ ಈಗಾಗಲೇ ರಾಜ್ಯದ ೨೫ ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ವಾರ್ಷಿಕ ವಿಮೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ನ್ಯೂ ಇಂಡಿಯಾ ಅಶೂರೆನ್ಸ್ ಸಂಸ್ಥೆಯ ಸಹಯೋಗದೊಡನೆ ದೇಶದಲ್ಲೇ ವಿಶಿಷ್ಟವಾಗಿ ರೂಪಿಸಲಾದ ಈ ಯೋಜನೆಯಡಿ ಮಕ್ಕಳು ವಾರ್ಷಿಕ ೧೦ ಸಾವಿರ ರೂ.ಗಳವರೆಗೆ ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ. ಮೌಲಾಲಿಯಂಥ ವಿಶೇಷ ಪ್ರಕರಣಗಳಲ್ಲಿ ಹೆಚ್ಚಿನ ನೆರವು ನೀಡುವುದೂ ಈ ಯೋಜನೆಯ ಪ್ರಮುಖ ಅಂಶ. ಆರೋಗ್ಯ ಚೇತನ ಕಾರ್ಯಕ್ರಮದಡಿ ಹೊರರೋಗಿಗಳಾದ ಶಾಲಾ ಮಕ್ಕಳೂ ೩೦೦ ರೂ.ವರೆಗಿನ ವೆಚ್ಚಗಳನ್ನು ಪಡೆಯುವ ವ್ಯವಸ್ಥೆ ದೇಶದಲ್ಲೇ ಪ್ರಥಮ.

Moulali with Arogya Chetana cutout
ಈಗಾಗಲೇ ಅದಮ್ಯ ಚೇತನದ ವತಿಯಿಂದ ಐದು ಇಂಥ ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳಿಗೆ ಸಂಪೂರ್ಣನೆರವು ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಮೂರು ವರ್ಷ ವಯಸ್ಸಿನ ಯಶ್ವಂತನಿಂದ ಹಿಡಿದು ೧೨ ವರ್ಷದ ಮೈತ್ರಿ, ಶ್ವೇತಾ, ಮಹೇಶ್‌ಕುಮಾರ್ ಮತ್ತು ಸಿಂಧು – ಎಲ್ಲರೂ ಈ ಶಸ್ತ್ರಚಿಕಿತ್ಸೆ ಹೊಂದಿ ಗುಣಮುಖರಾಗಿ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಈಗ ಮೌಲಾಲಿಯ ಬದುಕಿನಲ್ಲೂ ಸಂಕ್ರಾಂತಿ. ಅವನ ತಂದೆ ತಾಯಂದಿರ ಮುಖದಲ್ಲಿ ಸಮಾಧಾನದ ಕಿರುನಗೆ.

