Adamya Green #400
ಹಸಿರು ಜೀವನ ಶೈಲಿ ಅಗತ್ಯ, ಅನಿವಾರ್ಯತೆ ಪ್ರತಿಪಾದಿಸಿದ ‘400ನೇ ಹಸಿರು ಭಾನುವಾರ’
2023ರ ಆಗಸ್ಟ್ 27, ಭಾನುವಾರದಂದು, ಬೆಂಗಳೂರಿನ ಜಯನಗರ 5ನೇ ಹಂತದ ಎಂ.ಇ.ಎಸ್. ಮೈದಾನವು (ದೂರವಾಣಿ ವಿನಿಮಯ ಕೇಂದ್ರ ಎದುರು) ಎಂದಿನಂತಿರಲಿಲ್ಲ. ಪರಿಸರ ಸಂರಕ್ಷಣೆಯ ಮೂಲಕ ಸಾರ್ವಜನಿಕರಲ್ಲಿ ಹಸಿರು ಪ್ರೀತಿ ಹೆಚ್ಚಿಸುವ ಐತಿಹಾಸಿಕ ಸಮಾರಂಭಕ್ಕೆ ಇಡೀ ದಿನ (‘ಊಟ ಫ್ರಾಮ್ ತೋಟ’ದ 43ನೇ ಆವೃತ್ತಿ ಹಾಗೂ ಅದಮ್ಯ ಚೇತನದ 400ನೇ ಹಸಿರು ಭಾನುವಾರ) ಸಾಕ್ಷಿಯಾಯಿತು.
ಅದಮ್ಯ ಚೇತನ, ಊಟ ಫ್ರಾಮ್ ತೋಟ ಹಾಗೂ ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದ ಈ ಸಮಾರಂಭದಲ್ಲಿ ಸಾವಯವ ಕೃಷಿ ಮಹತ್ವ ತಿಳಿಸುವ, ಖಾದಿ ಉಡುಗೆಗಳು, ನೀರಿನ ಮಿತ ಬಳಕೆಯ ಅಗತ್ಯ, ಹಲಸಿನ ವೈವಿಧ್ಯಮಯ ತಿನಿಸುಗಳು, ಆಯುರ್ವೇದ ಔಷಧಿಯ ಉತ್ಪನ್ನಗಳು, ಗುಡಿ ಕೈಗಾರಿಕೆಗಳ ಉತ್ಪನ್ನಗಳು, ಹೀಗೆ ಹಸಿರು ಜೀವನ ಶೈಲಿಯ ಅಗತ್ಯ ಹಾಗೂ ಅನಿವಾರ್ಯತೆ ಹೆಚ್ವಿಸುವ, ಅರಿವು ಮೂಡಿಸುವ ಹಬ್ಬದ ವಾತಾವರಣ ತುಂಬಿತ್ತು.
ಸಣ್ಣ ಸಣ್ಣ ಕುಂಡಗಳಲ್ಲಿ ಹೂ-ಹಣ್ಣು-ಔಷಧೀಯ-ತರಕಾರಿಗ ಸಸಿಗಳನ್ನು ವಿತರಿಸುವ ಮೂಲಕ ಅದಮ್ಯ ಚೇತನ ಸಂಸ್ಥೆಯ ಹೆಮ್ಮೆಯ ದಾಖಲೆಯಾದ ‘ಹಸಿರು ಭಾನುವಾರ’ದ 400ನೇ ಕಾರ್ಯಕ್ರಮವು ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ಹಸಿರು ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ:
ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಭಾನುವಾರದಂದು ಹಸಿರು ಭಾನುವಾರ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೀಗ 400ನೇ ಹಸಿರು ಭಾನುವಾರವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರಥಮ ಬಾರಿಗೆ ‘ಹಸಿರು ಭಾನುವಾರ’ ಆರಂಭಿಸಿದಾಗಿನ ದಿನದಿಂದ ಹಾಗೂ ಕೋವಿಡ್ ಸಂದರ್ಭಗಳಲ್ಲೂ ಹಸಿರು ಭಾನುವಾರ ಆಚರಿಸಿದ ತಮ್ಮ ಅನುಭವಗಳನ್ನು ಹಾಗೂ ಯಶಸ್ಸಿನ ಈ ಯಾನದಲ್ಲಿ ಅದಮ್ಯ ಚೇತನ ಕಾರ್ಯಕರ್ತರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. ಬೆಂಗಳೂರಿನಲ್ಲಿ ಹಸಿರು ಕಡಿಮೆಯಾಗುತ್ತಿದೆ. ಹಸಿರು ಜೀವನ ಶೈಲಿ ಮಾಯವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬದುಕು ದುಸ್ತರವಾಗಲಿದೆ ಎಂದು ಎಚ್ಚರಿಸಿದರು.
ಕೃಷಿಕರಿಗೆ ಸನ್ಮಾನ
ಮಾನ್ಯಶ್ರೀ ಅನಂತಕುಮಾರ್ ಅವರ ಹೆಸರಿನಲ್ಲಿ ಪ್ರತೀ ವರ್ಷ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಗುತ್ತಿದೆ. ಅದರಂತೆ, ಹಲಸು ತೊಳೆಯಿಂದ ಬಗೆ ಬಗೆಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿರುವ ಕೃಷಿಕ, ಕಡೂರು ತಾಲೂಕಿನ ಸಕ್ಕರಾಯಪಟ್ಟಣದ ಶಿವಣ್ಣ ಹಾಗೂ ಮೂಲತಃ ಬಳ್ಳಾರಿಯವರಾದ ಹಾಗೂ ಹೂವು ಕೃಷಿಕರಾದ ಆನಂದ ಹವಾಲ್ದಾರ್ ಅವರನ್ನು ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಪ್ರಶಸ್ತಿಪತ್ರಗಳನ್ನು ನೀಡಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಐಡಿಎಫ್ ಅಧ್ಯಕ್ಷ ಶ್ರೀಕಾಂತ್ ಶೆಣೈ, ಶ್ರೀ ರಾಜೇಂದ್ರ ಹೆಗಡೆ, ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆ ಅಧ್ಯಕ್ಷ ಎಸ್. ಡಾ. ರಾಜೇಶ್, ಹೊಸ ಚಿಗುರು ಸಂಸ್ಥೆಯ ಶ್ರೀನಾಥ್, ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಶೇಷಾದ್ರಿಪುರಂ ಶಿಕ್ಷಣ ಸಮೂಹ ಸಂಸ್ಥೆಗಳು(ಕೆಂಗೇರಿ), ಜೈನ್ ಶಿಕ್ಷಣ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಅದಮ್ಯ ಚೇತನ ಸಂಸ್ಥೆಯ ಸ್ವಯಂ ಸೇವಕರು, ಮೊದಲಾದವರು ಭಾಗವಹಿಸಿದ್ದರು.