Adamya Green #401
‘ಹಸಿರು ಭಾನುವಾರ’ದ ಸಾಧನೆಗೆ 401ನೇ ಗರಿ
ಪರಿಸರ ಸಂರಕ್ಷಣೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ‘ಜೀವನದ ವ್ರತ’ ಎಂಬಂತೆ ಪಾಲಿಸಿಕೊಂಡು ಬರುತ್ತಿರುವ ಅದಮ್ಯ ಚೇತನ ಸಂಸ್ಥೆಯ ‘ಹಸಿರು ಭಾನುವಾರ’ದ ಕಾರ್ಯಕ್ರಮವು, 2023ರ ಸೆ. 3ರಂದು ‘401ನೇ ವಾರ’ದಲ್ಲಿ ತನ್ನ ದಿಟ್ಟ ಹೆಜ್ಜೆ ಮೂಡಿಸಿ, ಸಾಧನೆಯ ಮುಡಿಗೆ ಅಭಿಮಾನದ ಗರಿ ಸಿಕ್ಕಿಸಿಕೊಂಡಿತು.
ಮಾತ್ರವಲ್ಲ; ಸಾಮಾಜಿಕ ಕಳಕಳಿಯ ಯಾವುದೇ ಯೋಜನೆಯನ್ನು ನಿರಂತರವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಗೆ ‘ಉತ್ತಮ ಮಾದರಿ’ ಎಂಬುದನ್ನು ಸಾಬೀತುಪಡಿಸಿ, ಸಾರ್ವಜನಿಕ ವಲಯದಲ್ಲಿ ಪರಿಸರ ಸಂರಕ್ಷಣೆಯ ಪ್ರೇರಣೆಗೂ ಸೆಲೆಯಾಯಿತು.
ಅಷ್ಟು ಮಾತ್ರವಲ್ಲ, ಪರಸ್ಪರ ಸಹೋದರ ಭಾವವನ್ನು ಗಟ್ಟಿಗೊಳಿಸುವ ಸಾಂಪ್ರದಾಯಿಕ ಹಬ್ಬಗಳ ಪೈಕಿ ‘ರಾಖಿ’ಯೂ ಒಂದು. ಜನಮಾನಸದಲ್ಲಿ ಮಧುರ ಭಾವದ ಅಗತ್ಯವಿದೆ ಎಂಬುದರ ಸಾಂಕೇತಿಕವಾಗಿ ‘ಕೇಸರಿ ರಾಖಿ’ಯನ್ನು ಕಟ್ಟಿಕೊಳ್ಳಲೂ ಪ್ರೇರೇಪಿಸಿತು. ಪರಿಸರ ಸಂರಕ್ಷಣೆ ಕುರಿತ ಯಾವುದೇ ಯೋಜನೆಯು ದೇಶದ ಸದೃಢತೆಗೆ ಹಾಗೂ ಭದ್ರತೆಗೆ, ಸಾಮರಸ್ಯದ ಬದುಕಿಗೆ ಪೂರಕವಾಗಿದೆ ಎಂಬ ಸಂದೇಶ ನೀಡುವಲ್ಲಿಯೂ ಯಶಸ್ವಿಯಾಯಿತು.
ಬೆಂಗಳೂರಿನ ಸರ್ಜಾಪುರ-ಆನೇಕಲ್ ರಸ್ತೆಯ ಮುತ್ತನಲ್ಲೂರು ಗ್ರಾಮದ ದೇವರಕೆರೆಯ ಬದಿ, ‘401ನೇ ಹಸಿರು ಭಾನುವಾರ’ದ ನಿಮಿತ್ತ ನಾನಾ ಜಾತಿಯ 401 ಗಿಡಗಳನ್ನು (2023ರ ಸೆ. 3) ನೆಡುವ ಮೂಲಕ, ಪರಿಸರ ಸಂರಕ್ಷಣೆಯ ತನ್ನ ಸಂಕಲ್ಪ ಶಕ್ತಿಯನ್ನು ಮತ್ತೂ ಹೆಚ್ಚಿಸಿಕೊಂಡಿತು.
ನಿಸ್ವಾರ್ಥ ಸೇವಾಸಕ್ತರೇ ‘ಹಸಿರು ಭಾನುವಾರ’ದ ಶಕ್ತಿ
‘401ನೇ ಹಸಿರು ಭಾನುವಾರ’ ನಿಮಿತ್ತ ಗಿಡಗಳನ್ನು ನೆಡಲು ಸಿದ್ದವಾಗಿದ್ದ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ನಿಸ್ವಾರ್ಥ ಮನಸ್ಸಿನ ಸೇವಾ ಕಾರ್ಯಕರ್ತರೇ ‘ಹಸಿರು ಭಾನುವಾರ’ ದ ನಿರಂತರತೆಗೆ ಚಾಲನಾಶಕ್ತಿಯಾಗಿದ್ದಾರೆ. ಕೋವಿಡ್-19 ಸಂದರ್ಭದಲ್ಲೂ , ಸುಮಾರು 20 ಭಾನುವಾರಗಳಲ್ಲೂ ‘ಹಸಿರು ಭಾನುವಾರ’ವನ್ನು ಮುಂದುವರಿಸಿಕೊಂಡು ಬರಲಾಯಿತು. ಅದಕ್ಕೆ, ಕಾರ್ಯಕರ್ತರ ಉತ್ಸಾಹವೇ ಕಾರಣ. ಆದ್ದರಿಂದ, ಪ್ರಕೃತಿಯ ಸಂರಕ್ಷಣೆಯಾದರೆ ಮಾನವನ ಉಳಿವು ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಜಗತ್ತನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮೈನ್ ಮೆಟ್ರಿಕ್ ಸಂಸ್ಥೆಯ ಸಂಸ್ಥಾಪಕ ಸುಜೀತ್ ಕುಮಾರ್, ಬಾಷ್ ಕಂಪನಿಯ ಮನೋಜ್ ಕುಮಾರ್ ವೇದಿಕೆಯ ಮೇಲಿದ್ದರು.
ಯೂತ್ ಫಾರ್ ಸೇವಾ, ಗಿವ್ ಮಿ ಟ್ರೀಸ್ ಸಂಸ್ಥೆಯ ಕಾರ್ಯಕರ್ತರು, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಎಸ್.ಎಲ್.ಎನ್. ಕಾಲೇಜು ವಿದ್ಯಾರ್ಥಿಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಸ್ಥಳೀಯರು ಸೇರಿ 400ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.